ಷೇಕ್ ಮೊಹಮ್ಮದ್ ಅಬ್ದುಲ್ಲಾ
	1905-82. ಕಾಶ್ಮೀರದ ಪ್ರಥಮ ಪ್ರಧಾನಮಂತ್ರಿ (1948-53). ಹೊಸ ಕಾಶ್ಮೀರದ ಮೊದಲ ಮುಖ್ಯಮಂತ್ರಿ (1975-82). ಇವರು 1905 ಡಿಸೆಂಬರ್ 5ರಂದು ಶ್ರೀನಗರದ ಸೌರ ಎಂಬ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಾಲೆಗಳಲ್ಲಿ ಪಡೆದು ಪಂಜಾಬ್ ವಿಶ್ವವಿದ್ಯಾಲಯ ದಿಂದ ಪದವಿಯನ್ನು (1928), ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ ದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು (1930) ಪಡೆದು ಶಿಕ್ಷಕರಾದರು. ವಿದ್ಯಾರ್ಥಿ ದೆಸೆಯಲ್ಲಿಯೆ ಹಲವಾರು ಚಿಂತಕರ ಹಾಗೂ ರಾಷ್ಟ್ರ ನಾಯಕರ ಪ್ರಭಾವಕ್ಕೆ ಒಳಗಾದರು.

	ಇವರು 1929ರಲ್ಲಿ ರೀಡಿಂಗ್ ರೂಮ್ ಪಾರ್ಟಿ ಸ್ಥಾಪಿಸಿ ಸುಶಿಕ್ಷಿತ ಮುಸ್ಲಿಮ್ ಯುವಕರಿಗೆ ಉದ್ಯೋಗದ ನೇಮಕಾತಿಯಲ್ಲಿ ಕೆಲವು ರಿಯಾಯಿತಿ ಪಡೆಯಲು ಮಹಾರಾಜರನ್ನು ಭೇಟಿಮಾಡಿದರು. ಆದರೆ ಬೇಡಿಕೆ ಈಡೇರದೇ ಹೋದಾಗ ಹೋರಾಟದ ಹಾದಿ ಹಿಡಿದರು.

	ಅನಂತರ ತಮ್ಮ ಶಿಕ್ಷಕವೃತ್ತಿಗೆ ರಾಜೀನಾಮೆ ನೀಡಿದರು. ಜಮ್ಮು ಕಾಶ್ಮೀರದಲ್ಲಿ ತಿರಸ್ಕøತ ಬಹುಸಂಖ್ಯಾತ ಮುಸ್ಲಿಮರ ಪರವಾಗಿ ರಾಜ ಪ್ರಭುತ್ವ ಹಾಗೂ ಊಳಿಗಮಾನ್ಯ ಪದ್ಧತಿಗಳ ವಿರುದ್ಧದ ಹೋರಾಟದಲ್ಲಿ ಇವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಇವರ ಪ್ರಜಾಪ್ರಭುತ್ವ ವಾದಿ ಹೋರಾಟದ ಫಲವಾಗಿ  ವಿದ್ಯಾವಂತ ಮುಸ್ಲಿಮರಿಗೆ ನೇಮಕಾತಿಯಲ್ಲಿ ಅವಕಾಶ ಹಾಗೂ ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಸ್ವಾತಂತ್ರ್ಯ ನೀಡಲಾಯಿತು.

	ಶೇರ್-ಎ-ಕಾಶ್ಮೀರ್ ಎಂದು ಪ್ರಖ್ಯಾತರಾಗಿದ್ದ ಇವರು 1932ರಲ್ಲಿ ಮುಸ್ಲಿ ಮರ ಹಕ್ಕುಗಳ ರಕ್ಷಣೆಗಾಗಿ ಜಮ್ಮು-ಕಾಶ್ಮೀರ್ ಮುಸ್ಲಿಮ್ ಕಾನ್ಫರೆನ್ಸ್ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಇದೇ ವೇಳೆಗೆ ಭಾರತದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಚಳವಳಿ ಇವರ ಮೇಲೆ ಪ್ರಭಾವಬೀರಿತು. 1930ರಲ್ಲಿ ನೆಹರು ಅವರನ್ನು ಭೇಟಿ ಮಾಡಿದ ಅನಂತರ ಅವರ ವ್ಯಕ್ತಿತ್ವಕ್ಕೆ ಮಾರು ಹೋದರು. ಇವರು ತಮ್ಮ ಪ್ರಾರಂಭಿಕ ಹೋರಾಟವನ್ನು ಮುಸ್ಲಿಮರ ಪರವಾಗಿ ಆರಂಭಿಸಿದರೂ ಊಳಿಗಮಾನ್ಯ ಪದ್ಧತಿಗೆ ಮುಸ್ಲಿ ಮೇತರರೂ ಬಲಿಪಶುಗಳಾಗಿರುವುದನ್ನು ಅರಿತು, ಜಮ್ಮು-ಕಾಶ್ಮೀರ್ ಮುಸ್ಲಿಮ್ ಕಾನ್ಫರೆನ್ಸ್ ಪಕ್ಷವನ್ನು ನ್ಯಾಷನಲ್ ಕಾನ್ಫರೆನ್ಸ್ ಆಗಿ ಪರಿ ವರ್ತಿಸಿದರು (1939). ಮೊಹಮ್ಮದ್ ಅಲೀ ಜಿನ್ನಾರಂತಹ ಪ್ರತ್ಯೇಕತಾವಾದಿಗಳ ಒತ್ತಡದ ನಡುವೆಯೂ ತಮ್ಮ ಹೋರಾಟಕ್ಕೆ ಜಾತ್ಯತೀತ ನೆಲೆ ಒದಗಿಸಿದರು.

	ಸ್ವಾತಂತ್ರ್ಯ ಸಂದರ್ಭದಲ್ಲಿ ಇವರು ದೇಶವಿಭಜನೆಗೆ ವಿರುದ್ಧವಾಗಿದ್ದರು. ಅನಂತರ ಇವರು ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಲು ನಡೆಸಿದ ಪ್ರಯತ್ನ ತಡೆಯಲು ಭಾರತದ ಒಕ್ಕೂಟಕ್ಕೆ ಕಾಶ್ಮೀರವನ್ನು ಸೇರಿಸಲು ಮಹಾರಾಜರ ಮನ ಒಲಿಸಿದರು. 1947ರ ಅಕ್ಟೋಬರ್‍ನಲ್ಲಿ ಭಾರತಸೇನೆ ಪಾಕ್ ಬೆಂಬಲಿತ ದಾಳಿಕೋರರನ್ನು ಹೊರಹಾಕಿದ ಅನಂತರ ಇವರು ತಾತ್ಕಾಲಿಕ ಆಡಳಿತದ ಮುಖ್ಯಸ್ಥರಾಗಿ ನೇಮಿಸಲ್ಪಟ್ಟರು. 1948ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾಸಮಿತಿಯ ಸಭೆಯಲ್ಲಿ ಭಾರತ ನಿಯೋಗದ ಸದಸ್ಯರಾಗಿದ್ದರು. ಅಲ್ಲಿಂದ ಹಿಂದಿರುಗಿದ ಅನಂತರ 1948 ಮಾರ್ಚ್‍ನಲ್ಲಿ ಕಾಶ್ಮೀರದ ಪ್ರಧಾನಮಂತ್ರಿಯಾಗಿ ಅಧಿಕೃತವಾಗಿ ನೇಮಕಗೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಭೂಸುಧಾರಣೆ ಯಂತಹ ಮಹತ್ತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 1949ರಲ್ಲಿ ಸಂವಿಧಾನ ರಚನಾಸಮಿತಿಯ ಸದಸ್ಯರಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೆಯ ವಿಧಿ ಕರಡು ಸಂವಿಧಾನ ಸೇರುವಲ್ಲಿ ಪ್ರಮುಖ ಪಾತ್ರವಹಿಸಿದರು.

	1953 ಆಗಸ್ಟ್‍ನಲ್ಲಿ ಉಂಟಾದ ರಾಜಕೀಯ ಬೆಳೆವಣಿಗೆಯಿಂದಾಗಿ ಇವರು ಜಮ್ಮು-ಕಾಶ್ಮೀರ ಪ್ರತ್ಯೇಕ ರಾಜ್ಯ ಪಡೆಯುವುದಕ್ಕಾಗಿ ಪಾಕಿಸ್ತಾನದೊಡನೆ ಸಂಬಂಧವನ್ನಿರಿಸಿಕೊಂಡಿದ್ದರೆಂಬ ಅನುಮಾನದಿಂದ ಬಂಧಿಸಲಾಯಿತು. ಅನಂತರ ತಮ್ಮ ಮೊದಲ ಆದ್ಯತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದು ಮತ್ತು ಭಾರತ-ಪಾಕಿಸ್ತಾನದ ನಡುವೆ ಹೊಂದಾಣಿಕೆ ತರುವುದೇ ಆಗಿದೆ ಎಂದು ಸ್ಪಷ್ಟಪಡಿಸಿದ ಅನಂತರ ಬಿಡುಗಡೆಗೊಳಿಸಲಾಯಿತು (1964). ಸುದೀರ್ಘ ಮಾತುಕತೆಯ ಅನಂತರ ಪ್ರಧಾನಿ ಇಂದಿರಾಗಾಂಧಿಯವರೊಡನೆ ಮಾಡಿಕೊಂಡ ಹೊಸ ಕಾಶ್ಮೀರ ಒಪ್ಪಂದ ದ(1975) ಪ್ರಕಾರ, ಜಮ್ಮು-ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ಒಪ್ಪಿದರು. ಭಾರತ ಸರ್ಕಾರ 370ನೆಯ ವಿಧಿಅನ್ವಯ ಆಡಳಿತ ನಡೆಸಲು ಒಪ್ಪಿತು.

	1975ರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಇವರು ಅಧಿಕಾರ ವಹಿಸಿಕೊಂಡರು. 1977ರಲ್ಲಿ ವಿಧಾನಸಭೆ ವಿಸರ್ಜನೆಯ ಅನಂತರ, ತಮ್ಮ ಪಕ್ಷದಿಂದಲೇ ಪುನರಾಯ್ಕೆ ಯಾಗಿ ಮುಖ್ಯಮಂತ್ರಿಯಾದರು. ತಮ್ಮ ಜೀವಿತಾವಧಿಯಲ್ಲಿನ ಕೊನೆಯ ಕೆಲವು ದಿನಗಳವರೆವಿಗೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದರು. ದೇಶವಿಭಜನೆಯಂತಹ ಸಂಕಷ್ಟಸಂದರ್ಭದಲ್ಲಿ ಇವರು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಹಾಗೂ ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಅನಂತರ ತಮ್ಮ ಹಿರಿಯಮಗ ಫರೂಕ್ ಅಬ್ದುಲ್ಲಾರಿಗೆ ಅಧಿಕಾರ ಹಸ್ತಾಂತರಿಸಿದರು. ಇವರು 1982 ಸೆಪ್ಟೆಂಬರ್ 8ರಂದು ನಿಧನಹೊಂದಿದರು.		
	(ಎಮ್.ಎಸ್.ಕೆ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ